ನನ್ನ ಬಗ್ಗೆ


ಒಂದು ಆಣೆ: ನಾನು ಕೆಳಗೆ ಬರೆದಿರುವುದೆಲ್ಲ ನಿಜ!

ನನ್ನ ಬಗ್ಗೆ ನಾನೇ ಬರೆದುಕೊಳ್ಳಬೇಕು. ಓದಲಿಕ್ಕೇ ಸಮಯವಿಲ್ಲದವರು ಬರೆದಾರೇ?
ನಾನು ಹುಟ್ಟಿದ್ದು ಕುಮಟೆಯಲ್ಲಿ. ಮನೆ ಬರಗದ್ದೆ. ಒಂದರಿಂದ ಏಳರವರೆಗೆ ಓದಿದ್ದು ಬರಗದ್ದೆಯಲ್ಲಿಯೇ. ಆನಂತರ ಎರಡು ವರ್ಷ ಹಾಯ್ಸ್ಕೂಲು ಕಡತೋಕೆಯಲ್ಲಿ, ಉಳಿದೆಲ್ಲ ವರುಷ ಕುಮಟೆಯಲ್ಲಿ. 

ತಮ್ಮಾ ನೀನು ಬರೆಯುತ್ತೀಯ ಹೌದು. ಇಂದಿನ ವಿದ್ಯಮಾನಗಳ ಕುರಿತು ಬರಿ. ಓದುವವರು ತುಂಬಾ ಜನ ಇರುತ್ತಾರೆ ಎಂದರು. ನಾನು ಹೂಂ ಅಂದೆ. 
ನನ್ನಲ್ಲಿ ಒಂದು ಅಧಿಕ ಪ್ರಸಂಗ ಉಂಟು. ಬೇರೆಯವರ ಮೆಚ್ಚಿಸಲಿಕ್ಕೆ ಎಂದಾಗಲೀ, ಓದಲಿ ಎಂದಾಗಲೀ ನಾನು ಬರೆಯುವುದಿಲ್ಲ. ಬರೆದ ಮೇಲೆ ತಿದ್ದುವುದಿಲ್ಲ. ಮನಸ್ಸಿಗೆ ಹೇಗೆ ಬಂತೋ ಹಾಗೆ. ಒಂದು ಸಲ ಬರೆದ ಮೇಲೆ ಮುಗಿಯಿತು. ನನಗೆ ಇಂದಿನ ವಿದ್ಯಮಾನಗಳು ಬೇಡ. ನನಗೆ ಎಲ್ಲೆಲ್ಲೂ ಕಾಲಿಗೆ ತಾಗುವ ಮಣ್ಣು ಧೂಳುಗಳು ಬೇಡ. ಅಚ್ಚ ಹಸಿರಾದ ಸಣ್ಣ ಹುಲ್ಲು ಬೇಕು ಕಾಲಡಿಗೆ; ರತ್ನಗಂಬಳಿ ಬೇಡ. ನಾನು ನಡೆಯುತ್ತೇನೆ. ಸುಸ್ತಾದರೆ ಸೈಕಲ್ಲು ಬೈಕಿನ ಮೇಲೆ ಓಡಾಡುತ್ತೇನೆ; ಅದೂ ಬೇಡ ಅನ್ನುವ ಮೂರ್ಖ ನಾನಲ್ಲ. ನನ್ನ ಪ್ರತಿ ಹೆಜ್ಜೆಯನ್ನೂ ನಾನು ಅನುಭವಿಸುತ್ತೇನೆ, ಆನಂದಿಸುತ್ತೇನೆ. ಬೇರೆಯವರಿಗೆ ಹೇಳುವ ಅವಶ್ಯಕತೆ ನನಗಿಲ್ಲ. ನಾನು ತಿರುಗಾಡುತ್ತೇನೆ; ಅಲೆದಾಡುತ್ತೇನೆ; ಫೋಟೋ ಹೊಡೆಸಿಕೊಂಡು ತೋರಿಸಿಕೊಳ್ಳುವ ಚಟವಿಲ್ಲ. ಅನಾವಶ್ಯಕಗಳ ಅವಶ್ಯಕತೆ ನನಗಿಲ್ಲ. 
ನಾನಿದ್ದೇನೆ. ಸುಖವಾಗಿದ್ದೇನೆ. ಸುಖವಾಗಿರುತ್ತೇನೆ. 
ಕಷ್ಟ ಬಂದರೆ ಖಂಡಿತವಾಗಿಯೂ ಯಾರಿಗೂ ಹೇಳುವುದಿಲ್ಲ. 
ಅರಿಷಡ್ವರ್ಗಗಳ ಮೀರಿ ಸನ್ಯಾಸಿಯಾಗ ಹೊರಟವ ನಾನಲ್ಲ. ಒಬ್ಬ ಸಾಮಾನ್ಯ ಮನುಷ್ಯನಾಗಿ ಪ್ರಕೃತಿ ನನ್ನ ಹೇಗೆ ನಡೆಸಿಕೊಳ್ಳುವುದೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ನಾನು ಪಾಪಿ; ನೀಚನಲ್ಲ. ನಾನು ದಡ್ಡ; ಬುದ್ಧಿವಂತನಲ್ಲ. 

ಪಕ್ಕದ ಮನೆಯ ಕೂಸು ನಿಂತಲ್ಲೇ ಕಾಲು ಕೆದರಿ ಓಡಿ ಹೋದರೂ, ಇನ್ನೂ ಲೇಬಲ್ ತೆಗೆಯದ ಶೋರೂಂ ನ ಕರೀ ಕನ್ನಡಕ ಹಾಕಿಕೊಂಡ ಫೋಟೋವನ್ನು ಫೇಸ್ಬುಕ್ಕಿನಲ್ಲಿ ಅಪ್ಲೋಡ್ ಮಾಡಿದರೂ ನನಗೇನೂ ವಿಶೇಷವೆನಿಸುವುದಿಲ್ಲ. ಹಾಗೆಂದು ವಯಸ್ಸೀನ ಪ್ರಭಾವ ಎಂದೂ ಅನಿಸುವುದಿಲ್ಲ. ಬೀಳಬೇಕಾದವರ ಪ್ರಭಾವ ಬೀಳಲಿಲ್ಲ ಅನಿಸುತ್ತದೆ ಅಷ್ಟೇ. 

ಅದು ಹಾಗಿರಲಿ. ನನ್ನ ಅಧಿಕಪ್ರಸಂಗ ಇರಲಿ ನನಗೇ. 
ನನಗೆ 'ಅನ್ನ ತಿನ್ನುವುದು' ಅಂದರೆ ಆಗಿ ಬರುವುದಿಲ್ಲ. ಅನ್ನ ಉಣ್ಣುವುದು ಅಂದರೆ ಮನಸ್ಸಿಗೆ ಸಮಾಧಾನ. 

ಎಲ್ಲರಂತೆಯೇ ನಾನೂ ಅನ್ನವನ್ನೇ ಉಣ್ಣುತ್ತೇನೆ. ಮೈ ಮೇಲೆ ಬಟ್ಟೆಯನ್ನೇ ಹಾಕುತ್ತೇನೆ. ನನಗೆ ಹಿಂಸೆ ಆಗಿ ಬರುವುದಿಲ್ಲ. ಹಾಗಂತ ಅದನ್ನ ಬಿಟ್ಟುಬಿಡಿ ಎಂದರೆ ಯಾರೂ ಬಿಡುವುದಿಲ್ಲ. ಒಂದು ಕ್ರೂರ ಕೊಲೆಯನ್ನು ಕಣ್ಣಾರೆ ಕಂಡಿದ್ದೇನೆ. ಅಂಥ ಸಿನೇಮಗಳನ್ನೂ ನೋಡಿದ್ದೇನೆ. ಪ್ರಕೃತಿಯಂತೆ ನಾನು!

ನಾನು ತಿರುಕ!

ನಗಬೇಡಿ. 

ತಾನು ವಿಭಿನ್ನ ಅಂದುಕೊಂಡವರನ್ನು ಪ್ರಪಂಚ ತಿರುಕ ಅನ್ನುತ್ತದೆ. ನಾನು ತಿರುಕ ಅಂದುಕೊಂಡರೆ ಜಗತ್ತೂ ತಿರುಕ ಅಂದುಕೊಳ್ಳುತ್ತದೆ.
ಹಾಗಾಗಿ ಒಂದು ಸಲ ನಾನು ತಿರುಕ. 
ಇನ್ನೊಂದು ಸಲ ನಾನು ವಿಭಿನ್ನ.
ಮತ್ತೊಂದು ಸಲ ನಾನು ಏನೂ ಅಲ್ಲ.
ಮಗದೊಂದು ಸಲ ನಾನು ಏನೇನೂ ಅಲ್ಲ.

ಇದಕ್ಕೂ ಜಾಸ್ತಿ ನನ್ನ ಬಗ್ಗೆ ಹೇಳಿದರೆ ನೆಂಟರ ಮನೆಗೆ ಫೋನ್ ಮಾಡಿ ಮದುವೆಗೆ ಕರೆಯುವ ಗತ್ತಿನಲ್ಲಿ ambulanceಗೆ ಫೋನ್ ಮಾಡಿಬಿಡುತ್ತೀರಿ.


ಮತ್ತೊಂದು ಆಣೆ: ಮೇಲೆ ಬರೆದಿರುವುದೆಲ್ಲ ಸುಳ್ಳು!  

3 comments:

  1. He he.. about me ne ondu post madidna nodiddu ide 1st.. nice :-0

    ReplyDelete
  2. ಹ ಹ
    ಒಂದು ಕ್ರೂರ ಕೊಲೆಯನ್ನು ಕಣ್ಣಾರೆ ಕಂಡಿದ್ದೇನೆ !!

    ReplyDelete